ರಾಮಾನಂದ
14ನೆಯ ಶತಮಾನದಲ್ಲಿದ್ದ ಭಕ್ತಿಪಂಥದ ಪ್ರಚಾರಕ. ಅಲಹಾಬಾದಿನಲ್ಲಿ ಜನಿಸಿದರು. ತಂದೆ ಪುಯಾಸದನ, ತಾಯಿ ಸುಶೀಲ. ರಾಘವಾನಂದರು ತಮ್ಮ ಗುರುವೆಂದು ಶ್ರೀರಾಮಚರಣ ಪದ್ಧತಿ ಎಂಬ ಗ್ರಂಥಗಳಲ್ಲಿ ಹೇಳಿಕೊಂಡಿದ್ದಾರೆ. ರಾಘವಾನಂದರು ವಿಶಿಷ್ಟಾದ್ವೈತತತ್ತ್ವ ಇವರ ವೇಲೆ ವಿಶೇಷ ಪ್ರಭಾವ ಬೀರಿತು. ತತ್ತ್ವಶಾಸ್ತ್ರದಲ್ಲೂ ರಾಘವಾನಂದರು ಇವರಿಗೆ ಶಿಕ್ಷಣ ನೀಡಿದರು. ಕಾಶಿಯಲ್ಲಿ ಮುಸ್ಲಿಂ ವಿದ್ವಾಂಸರ ಸಂಪರ್ಕದಿಂದಾಗಿ ಸರ್ವ ಧರ್ಮ ಸಮನ್ವಯ ಉದಾರ ದೃಷ್ಟಿ ಇವರಲ್ಲಿ ಬೆಳೆಯಿತು. ರಾಮಭಕ್ತಿಯ ಆಚಾರ್ಯರೆಂದೇ ರಾಮಾನಂದರನ್ನು ಪರಿಗಣಿಸಲಾಗಿದೆ. ಉತ್ತರ ಮತ್ತು ದಕ್ಷಿಣ ಭಾರತಗಳ ಮಧ್ಯೆ ಇವರು ಭಕ್ತಿಪಂಥದ ಒಂದು ಅಪೂರ್ವ ಸೇತುವೆ ಎನಿಸಿದರು. ರಾಮಾನಂದರ ಕೇಂದ್ರೀಯ ಮಠ ವಾರಾಣಸಿಯ ಪಂಚಗಂಗ ಘಾಟ್‍ನಲ್ಲಿತ್ತು. ಇಲ್ಲಿಂದಲೇ ಇವರು ತಮ್ಮ ವಿಚಾರಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಿದರು. ಇದಕ್ಕಾಗಿ ಇವರು ಭಾರತದಾದ್ಯಂತ ತೀರ್ಥಯಾತ್ರೆ ಕೈಗೊಂಡರು. ಜಾತಿ ಮತ್ತು ಲಿಂಗಭೇದವಿಲ್ಲದೆ ಎಲ್ಲರಿಗೂ ರಾಮನಾಮವನ್ನು ಬೋಧಿಸಿದರು. ಇವರು ಸ್ವತಃ ಹಿಂದಿಯಲ್ಲಿ ಬರೆಯುತ್ತಿ ದ್ದರಲ್ಲದೆ ತಮ್ಮ ಶಿಷ್ಯರಿಗೂ ಹಿಂದಿಯಲ್ಲಿ ಬರೆಯಲು ಉತ್ತೇಜಿಸಿದರು. ಶಿಷ್ಯರಲ್ಲಿ ಕಬೀರ, ಸುಖಾನಂದ, ಸುರಸುರಾನಂದ, ಪದ್ಮಾವತಿ, ಭಾವಾನಂದ, ರೈದಾಸ ಮೊದಾಲದವರು ಪ್ರಮುಖರು.								
(ಎಂ.ವಿ.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ